Sunday 5 June 2011

ಅನಿಸುತಿದೆ ಯಾಕೋ ಇಂದು..

ಪರಿಸರ ದಿನಾಚರಣೆಯ ಶುಭಾಶಯಗಳು!! 
ಈ ಪರಿಸಾದ ದಿನಕ್ಕೂ ಕನ್ನಡಕ್ಕೂ ಯಾವುದೇ ಸಂಬಂಧ ಇಲ್ಲ. ಕನ್ನಡದಲ್ಲಿಯೇ ಬ್ಲಾಗ್ ಮಾಡೋಣ ಅನ್ನಿಸಿತು, ಹಾಗಾಗಿ ಈ ಭಾಷೆ ಬದಲಾವಣೆ. ಕನ್ನಡವನ್ನು ಉಳಿಸಿ, ಪರಿಸರವನ್ನು ಉಳಿಸಿ ಎಂದು ಬಾಯಿ ಬಡೆದುಕೊಳೋಕಿಂತ ನಾನೇ ಕನ್ನಡದಲ್ಲಿ ಏನಾದ್ರೂ ಬರೆಯೋಣ ಎನ್ನಿಸಿತು. ಹೇಗಿದ್ದರೂ ಈ ಬ್ಲಾಗ್ ನಿಂದ  ಕಾಗದ ಉಳಿಸಿ ಉಪಕಾರ ಮಾಡುತ್ತಿದ್ದೇನೆ(ಬ್ಲಾಗ್ ಇಲ್ಲದಿದ್ದರೆ ಇನ್ನು ಹೆಚ್ಚು ಉಪಕಾರವಾಗುತ್ತಿದ್ದು ಯಾರಿಗೂ ನಷ್ಟವಾಗುತ್ತಿರಲಿಲ್ಲ ಎಂದೂ ಗೊತ್ತು). ಆಗಾಗ ಹೀಗೆ ಕನ್ನಡದಲ್ಲಿ ಬ್ಲಾಗ್ ಮಾಡಬೇಕು. ಮಾತೃಭಾಷೆಯ ಅಧ್ಯಯನವನ್ನು ಏಳನೇ ತರಗತಿಯಲ್ಲೇ ತ್ಯಜಿಸಿದ ನನಗೆ ಕನ್ನಡ ಎಷ್ಟು ಚೆನ್ನಾಗಿ ಬರುತ್ತೆ ಎಂಬುದನ್ನು ಆಗಾಗ ನಾನೇ ಪರೀಕ್ಷಿಸಿ ಕೊಳ್ಳುವುದು ಸರಿ ಎಂದು ನನ್ನ ನಂಬಿಕೆ. ನೀವೇನಂತೀರಾ?

ಅಂದಹಾಗೆ ಪರೀಕ್ಷೆ ಮಾತ್ರ ನನ್ನದು. ಫಲಿತಾಂಶ ಈ ಬ್ಲಾಗ್ ನ ಓದುಗರಾದ ನಿಮ್ಮದು.  

ಓದುಗರೇ, ನಿಮ್ಮ  ಸಹನೆ ಹಾಗು ನನ್ನ ಬ್ಲಾಗನ್ನು ಓದುವ ಉದಾರ ಮನಸನ್ನು ನಾನು ಅಭಿನಂದಿಸುತ್ತೇನೆ. ಒಂದು ವೇಳೆ ಹೀಗೆ ನನ್ನ ಬ್ಲಾಗ್ ಚೆನ್ನಾಗಿ ಇದ್ದಾರೆ ನನ್ನನ್ನು ದಯವಿಟ್ಟು ಪ್ರೋತ್ಸಾಹಿಸಿ. ಇಲ್ಲ ಎಂದರೆ "ಚೆನ್ನಾಗಿಲ್ಲ!" ಎಂದು ಹೇಳಿ. ಅದೂ ಕೂಡ ಒಂದು ರೀತಿಯ ಪ್ರೋತಾಹವೇ ತಾನೇ?

ಈಗ ನಾನು ನನ್ನ ಬ್ಲಾಗ್ ಗೆ ಕೊಟ್ಟ ಜಾಹೀರಾತು ಸಾಕು. ನನ್ನ ಕನ್ನಡವನ್ನು ಪರೀಕ್ಷಿಸಿದ್ದು ಸಾಕು. ಈಗ ಪರಿಸರದ ದಿನದ ಬಗ್ಗೆ ಚರ್ಚಿಸೋಣ. 
ಈ ದಿನವು ಪರಿಸರದ ಬಗ್ಗೆ ಪರಿಜ್ಞಾನ ಮೂಡಿಸುವುದಕ್ಕಾಗಿ ಆಚರಿಸಲಾಗುತ್ತದೆ. ಅರಣ್ಯ, ಬೆಟ್ಟ, ಸಮುದ್ರ, ನದಿ, ಮರ, ಮುಂತಾದವುಗಳ ಮಹತ್ವವನ್ನು ನಮಗೆ ಸಾರಿ ಸಾರಿ ತಿಳಿಸುವ ಒಂದು ಪ್ರಯತ್ನ. ನಮ್ಮ ಪರಿಸರದ ಈ ಮುಖ್ಯ ಅಂಗಗಳು ಇಲ್ಲದೆ ಜೀವ ಜಂತುಗಳು ಬದುಕಿರಲಾರರು ಎಂದು ನಮಗೆಲ್ಲ ಗೊತ್ತು. ಪ್ರಾಣಿಗಳಿಗಂತೂ  ನಮಗಿಂತ ಚೆನ್ನಾಗಿ ಅರ್ಥವಾಗಿರುವ ಸತ್ಯ ಇದು. ಆದರೂ ನಮಗೆ, ನಮ್ಮಂಥ "ಬುದ್ಧಿಜೀವಿಗಳಿಗೆ" ಯಾಕೆ ಬೇಕು ಪರಿಸರವನ್ನು ಕಾಪಾಡುವುದನ್ನು ಜ್ಞಾಪಿಸಲು ಒಂದು ದಿನ?

ಪ್ರಸಿದ್ಧ ಕ್ರಾಂತಿಕಾರಿಗಳು, ಮಹಾನುಭಾವರಾದ ಗಾಂಧೀಜಿ, ಅಂಬೇಡ್ಕರ್ ಮುಂತಾದವರ "ನೆನಪಿಗೆ" ಅವರ ಜನ್ಮದಿನವನ್ನು ಜಯಂತಿ ಎಂದು ಆಚರಿಸಲಾಗುತ್ತದೆ. ಇದೇನು ಪರಿಸರ ಜಯಂತಿಯೇ? ಅಂದರೆ ಪರಿಸರ ಇನ್ನಿಲ್ಲ ಎಂದು ತೀರ್ಮಾನ ಮಾಡಿದ್ದೇವೆ ಎಂದಾಯ್ತಲ್ಲ! ಸ್ವಾರ್ಥಿ ಮಾನವನಿಗೆ ಪರಿಸರ ಬೇಡವಾಯಿತೆ? ಆದರೂ ತನಗೆ ಸಿಗದದ್ದು ಬೇರೆ ಪ್ರಾಣಿಗಳಿಗೆ ಸಿಗಬಾರದೆಂದು ವನ್ಯಜೀವಿಗಳ ಪರಿಸರವನ್ನು ಕೂಡ ನಾಶ ಮಾಡುತ್ತಿದ್ದಾನೆಯೇ? ಈ ದಿನವನ್ನು ಆಚರಿಸದಿದ್ದರೂ ಪರಿಸರದ ಹಣೆಬರಹ ಹೀಗೆಯೇ ಇರುತ್ತದೆ. ಇದರಿಂದ ಪರಿಸರಕ್ಕೇನು ಲಾಭ/ನಷ್ಟ ಆಗುತ್ತಿಲ್ಲ. ಹೀಗೆ ದಿವಸಗಳು, ಘಂಟೆಗಳನ್ನು ಪರಿಸರಕ್ಕೆ ಅರ್ಪಿಸುವುದರಿಂದ ಅದರ ಸ್ಥಿತಿಗತಿ ಬದಲಾಗುವುದಿಲ್ಲ. ಏನೋ, ತಿಂಗಳಿಗೆ ಅಥವಾ ವಾರಕ್ಕೆ, weekdayಯ ಒಂದು ಘಂಟೆ ವಿದ್ಯುತ್ತನ್ನು ಬೆಂಗಳೂರಿನಲ್ಲಿ ಯಾರೂ ಕಡ್ಡಾಯವಾಗಿ ಉಪಯೋಗಿಸದಿದ್ದರೆ ಸ್ವಲ್ಪವಾದರೂ ಪರಿಣಾಮಕಾರಿ ಆಗಬಹುದು. ಆದರೆ ಹೀಗೆ ವರ್ಷಕ್ಕೊಂದು ಘಂಟೆಗೆ Earth Hour ಎಂದು ಹೆಸರಿಟ್ಟು, ಅದರಲ್ಲೂ ಅರ್ಧದಷ್ಟು ಜನ ಪಾಲಿಸದಿದ್ದರೆ, ಇದು ಯಾವ Earth Hour? 

ಪರಿಸರ ಉಳಿಸಲು ಮಾಡಬಹುದಾದ ಅಳಿಲು ಸೇವೆಗಳನ್ನು ನಾನು ಇಲ್ಲಿ ಬಿಡಿಸಿ ಹೇಳಬೇಕಾಗಿಲ್ಲ. ಈ ಹೊತ್ತಿಗೆ ಎಲ್ಲ ಶಾಲೆಗಳಲ್ಲಿಯೂ ಮೂರನೇ ತರಗತಿಯ ಮಕ್ಕಳೂ ಭಾಷಣಗಳ ಮೂಲಕ ಹೇಳುತ್ತಿರುತ್ತವೆ. ರಸ್ತೆಗಳಲ್ಲಿ ಕಸದ ರಾಶಿಯ ಪಕ್ಕದಲ್ಲಿಯೇ ದೊಡ್ಡದೊಂದು ಪತ್ರಿಕೆ ಅಂಟಿಸಿ "ಸ್ವಚ್ಚ ಬೆಂಗಳೂರನ್ನು ಉಳಿಸಿ" ಎಂದು ಗುಂಡುಗುಂಡಾದ ಅಕ್ಷರಗಳಲ್ಲಿ ಬರೆದಿರುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ನಿಮಗೇ ಗೊತ್ತಿರುತ್ತದೆ.
ಇನ್ನು ನೀವುಂಟು, ನಿಮ್ಮ ಪರಿಸರವುಂಟು. ಬದುಕಿರಿ, ಬದುಕಲು ಬಿಡಿ. 
ಜಯಶ್ರೀ, ತಲೆ ಕೆಟ್ಟು ಹೋಯಿತಾ? ಇದನ್ನು ಓದಲು ಎಷ್ಟು ಹೊತ್ತು ಬೇಕಾಯಿತು? :-P 

No comments:

Post a Comment